
Kan-1: ಕನ್ನಡ ಮಾಧ್ಯಮದ ಸ್ಪರ್ಧಾ ಆಕಾಂಕ್ಷಿಗಳೇ ಈ ವಿಶಿಷ್ಟ ಜ್ಞಾನ ಕುಟೀರಕ್ಕೆ ನಿಮಗಿದೋ ಭವ್ಯ ಸ್ವಾಗತ!

ಇದೊಂದು ಆಂದೋಲನ. ಕನ್ನಡ ಮಾಧ್ಯಮದಲ್ಲಿಯೇ ಐಎಎಸ್ ಪರೀಕ್ಷೆಯನ್ನು ಬರೆದು ನೀವೆಲ್ಲ ಯಶಸ್ಸು ಗಳಿಸಬೇಕೆನ್ನುವುದು ನನ್ನ ಪ್ರಾಮಾಣಿಕ ಆಸೆ. ಇದಕ್ಕಾಗಿ "ಕನ್ನಡದಲ್ಲಿಯೇ ಐಎಎಸ್ ಮಾಡಿ" ಎಂಬ ಈ ಆಂದೋಲನವನ್ನು ಈ ವಿಶಿಷ್ಟ ಜ್ಞಾನ ಕುಟೀರದಿಂದ ನಾನು ಆರಂಭಿಸಿದ್ದೇನೆ
– Ias Monk
ಕನ್ನಡದಲ್ಲಿಯೇ ಐಎಎಸ್ ಮಾಡಿ:
ಎಂದರೆ ಇಂಗ್ಲಿಷ್ ಬೇಕಾಗೇ ಇಲ್ಲ ಅಂತಲ್ಲ. ಇಂಗ್ಲಿಷ್ ಬೇಕು. ಇಂಗ್ಲಿಷ್ನಲ್ಲಿ ಪಾಂಡಿತ್ಯ ಬೇಕಿಲ್ಲ ಅಷ್ಟೆ. ಇಂಗ್ಲಿಷ್ ಪತ್ರಿಕೆಗಳನ್ನು ಓದಿ ಅರ್ಥ ಮಾಡಿಕೊಳ್ಳುವಷ್ಟು ಇಂಗ್ಲಿಷ್ ಜ್ಞಾನ ನಿಮ್ಮಲ್ಲಿ ಇರಬೇಕು. ಇಲ್ಲ ಎಂದಾದರೆ ಅದನ್ನು ಬೆಳೆಸಿಕೊಳ್ಳಲು ಈಗಿನಿಂದಲೇ ಆರಂಭಿಸಿ. ಇದಕ್ಕಾಗಿ ಈ ಕುಟೀರದ ಇಂಗ್ಲಿಷ್ ವಿಭಾಗವನ್ನು ತಪ್ಪದೇ ಅನುಸರಿಸುತ್ತ ಬನ್ನಿ. ಪರೀಕ್ಷೆಗೆ ಬೇಕಾಗುವ ಇತರ ಎಲ್ಲಾ ವಿಷಯಗಳೊಂದಿಗೆ, ಮುಖ್ಯವಾದ ಪ್ರಚಲಿತ ವಿದ್ಯಮಾನಗಳನ್ನೂ ಇಲ್ಲಿ ಕೊಡಲಾಗುತ್ತದೆ. ಇದನ್ನೀನೆಲ್ವುಲ ನೀವು ಓದುತ್ತ ಬಂದರೆ, ಇಂಗ್ಲಿಷ್ ದಿನ ಪತ್ರಿಕೆಯನ್ನು ಓದುವ ಅವಶ್ಯಕತೆಯೇ ಇಲ್ಲ.
ಮುಖ್ಯ ಪರೀಕ್ಷೆಯ ಪತ್ರಿಕೆಗಳನ್ನು ಕನ್ನಡದಲ್ಲಿ ಬರೆದರೆ, ರಾಷ್ಟ್ರಮಟ್ಟದ ಇಂಗ್ಲಿಷ್ ಅಭ್ಯರ್ಥಿಗಳು ಮತ್ತು ಹಿಂದಿ ಮಾಧ್ಯಮದ ಅಭ್ಯರ್ಥಿಗಳೊಂದಿಗೆ ನೀವು ಸರಿ ಸಮವಾಗಿ ಸ್ಪರ್ಧೆಯಲ್ಲಿ ನಿಲ್ಲುತ್ತೀರಿ. ನಿಮ್ಮ ಉತ್ತರಗಳು ಯೋಗ್ಯ ಮಟ್ಟದಲ್ಲಿದ್ದರೆ, ಅಗ್ರ ೧೦ ರ್ಯಾಂಕ್ ಒಳಗೇ ನಿಮ್ಮ ಫಲಿತಾಂಶವನ್ನು ನಿರೀಕ್ಷಿಸಬಹುದು.
ಆದರೆ ಬಹಳಷ್ಟು ಅಭ್ಯರ್ಥಿಗಳಿಗೆ ಕನ್ನಡದ ಬಗ್ಗೆ ಕೀಳರಿಮೆ ಇದೆ. ಹಾಗೆಂದು ಇವರು ಇಂಗ್ಲಿಷ್ನಲ್ಲಿ ಪಾಂಡಿತ್ಯ ಹೊಂದಿದ್ದಾರೆಂದೇನಿಲ್ಲ. ಅತ್ತ ಇಂಗ್ಲಿಷೂ ಸರಿಯಾಗಿ ಬರದೇ ಇತ್ತ ಕನ್ನಡದ ಬಗ್ಗೆಯೂ ತಾತ್ಸಾರತೆ ಹೊಂದಿರುವ ಇಂತಹ ಅಭ್ಯರ್ಥಿಗಳು ಈ ಪರೀಕ್ಷೆಯಲ್ಲಿ ಉತ್ತಮ ರ್ಯಾಂಕ್ ಪಡೆಯುವುದಾದರೂ ಹೇಗೆ? ಹೀಗಾಗಿ ಕೀಳರಿಮೆಯನ್ನು ಮೊದಲು ಕಿತ್ತು ಹಾಕಿ.
ಎಲ್ಲ ಪರೀಕ್ಷೆಗಳಿಗೂ ಐಎಎಸ್ ಪರೀಕ್ಷೆ ತಾಯಿ ಎನ್ನುತ್ತಾರೆ.ಈ ಪರೀಕ್ಷೆಗೆ ಸಿದ್ಧತೆ ನಡೆಸುವವರು, ಬೇರೆ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಲೂ ಸಮರ್ಥರಾಗುತ್ತಾರೆ. ಹೀಗಾಗಿ ಇಲ್ಲಿ ಕೊಡಲಾಗುವ ಎಲ್ಲ ಅಂಶಗಳೂ ಕೇವಲ ಐಎಎಸ್ಗಷ್ಟೇ ಅಲ್ಲ ಇತರ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಅತ್ಯುಪಯುಕ್ತ.
ಮುಂಬರುವ ವರ್ಷಗಳಲ್ಲಿ ಐಎಎಸ್ ಪರೀಕ್ಷೆಯನ್ನು ಕನ್ನಡದಲ್ಲಿಯೂ ನಡೆಸಲಾಗುತ್ತದೆ. ಆಗ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಈ ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಇನ್ನೂ ಹೆಚ್ಚು ಸುಲಭವಾಗುತ್ತದೆ.
ಇನ್ನೊಂದು ವರ್ಗದ ಅಭ್ಯರ್ಥಿಗಳಿದ್ದಾರೆ. ಅವರು “ಅಯ್ಯೋ ಐಎಎಸ್ ಎಂದರೆ ಇಂಗ್ಲಿಷ್ ಗೊತ್ತಿರಲೇಬೇಕು, ಇದು ನನಗೆ ಅಸಾಧ್ಯ” ಎಂದು ಸಣ್ಣ ಪುಟ್ಟ ಪರೀಕ್ಷೆಗಳಿಗಷ್ಟೇ ಸೀಮಿತಗೊಳ್ಳುತ್ತಾರೆ. ಇಂತಹ ಎಷ್ಟೋ ಅಭ್ಯರ್ಥಿಗಳಲ್ಲಿ ಐಎಎಸ್ ಪರೀಕ್ಷೆಯಲ್ಲಿ ಯಶಸ್ಸು ಕಾಣುವಷ್ಟು ಪ್ರತಿಭೆ, ಇಚ್ಛಾಶಕ್ತಿಗಳು ಇರುತ್ತವೆ. ಆದರೆ ಇಂಗ್ಲಿಷ್ ಬಗೆಗಿನ ಭಯದಿಂದ ಅದು ಅವರಿಗೆ ಗೊತ್ತೇ ಆಗುವುದಿಲ್ಲ. ಪೊಲೀಸ್ ಪೇದೆಯೋ ಪಿಎಸ್ಐಯೊ, ಎಸ್ಅಡಿಎನೊ ಅಥವಾ ಕೆಎಸ್ನ ಗ್ರೂಪ್ ಬಿ ಹುದ್ದೆಗಳಲ್ಲೋ ಇವರು ಅಲ್ಪತೃಪ್ತರಾಗಿಬಿಡುತ್ತಾರೆ.
ಇಂತಹ ವೈವಿಧ್ಯಮ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಉಪಯುಕ್ತವಾಗಲಿ ಎಂಬ ಉದ್ದೇಶದಿಂದ ನಾನು ಈ ಆಂದೋಲನ ಆರಂಭಿಸಿದ್ದೇನೆ. ಈ ಆಂದೋಲನದಲ್ಲಿ ನೀವೂ ಭಾಗಿಯಾಗಿ ನಿಮ್ಮ ಸ್ನೇಹಿತರನ್ನೂ ಕರೆತನ್ನಿ.
ನೆನಪಿಡಿ : ಈ ಪರೀಕ್ಷೆಯಲ್ಲಿ ಯಶಸ್ಸು ಕಾಣಲು ಕನಿಷ್ಟ ಎರಡು ವರ್ಷಗಳ ತಯಾರಿ ಬೇಕು. ೨೦೨೬ರಲ್ಲಿ ನಡೆಯುವ ಪೂರ್ವಭಾವೀ ಪರೀಕ್ಷೆಯನ್ನು ಗುರಿಯಾಗಿರಿಸಿಕೊಂಡು ನಿಮ್ಮ ಸಿದ್ಧತೆಯನ್ನು ಆರಂಭಿಸಿ.
ಏಳಿ ಎದ್ದೇಳಿ… ಎಂಬ ವಿವೇಕ ವಾಣಿಯನ್ನು ನೆನಪಿಟ್ಟುಕೊಳ್ಳಿ. ಗುರಿ ಮುಟ್ಟುವವರೆಗೂ ನಿಲ್ಲದಿರಿ. ಡಿವಿಜಿ ಅವರ ಬದುಕು ಜಟಕಾ ಬಂಡಿಯ ಕುದುರೆಯಂತೆ ಓಡುತ್ತಲೇ ಇರಿ, ದಣಿವರಿಯದೇ.
ನನ್ನ ಮೆಚ್ಚಿನ ಕವಿಗಳಲ್ಲಿ ಒಬ್ಬರಾದ , ಅಮೆರಿಕಾದ ರಾಬರ್ಟ್ ಫ್ರಾಸ್ಟ್ ಅವರ ಒಂದು ಕವನದ ಸಾಲುಗಳು ಹೀಗಿವೆ :
Stopping by Woods on a Snowy Evening
-By Robert Frost
Whose woods these are I think I know.
His house is in the village though;
He will not see me stopping here
To watch his woods fill up with snow.
My little horse must think it queer
To stop without a farmhouse near
Between the woods and frozen lake
The darkest evening of the year.
He gives his harness bells a shake
To ask if there is some mistake.
The only other sound’s the sweep
Of easy wind and downy flake.
The woods are lovely, dark and deep,
But I have promises to keep,
And miles to go before I sleep,
And miles to go before I sleep.
ಕೊನೆಯ ನಾಲ್ಕು ಸಾಲುಗಳನ್ನು ಗಮನಿಸಿ. ಈ ಸಾಲುಗಳು ನಿಮ್ಮ ಪರೀಕ್ಷಾ ಸಿದ್ಧತೆಗೆ ಸ್ಫೂರ್ತಿ ನೀಡಲಿ. ಹಾಗೆಯೇ ಈ ಕವನದಲ್ಲಿ ನಿಮಗೆ ಅರ್ಥವಾಗದ ಕಠಿಣ ಪದಗಳು ಎಷ್ಟು? ಎಣಿಸಿ. ಸಂಖ್ಯೆಯನ್ನು ಒಂದು ನೋಟ್ಬುಕ್ನಲ್ಲಿ ಬರೆದುಕೊಳ್ಳಿ ಮತ್ತು ಆಯಾ ಪದದ ಅರ್ಥವನ್ನು ಇಂಗ್ಲಿಷ್ ಶಬ್ದಕೋಶದಿಂದ ನೋಡಿ ಬರೆದುಕೊಳ್ಳಿ. ಹಾಗೆಯೇ ಈ ಕವನವನ್ನು ಕನ್ನಡಕ್ಕೆ ಭಾಷಾಂತರಿಸಲು ಪ್ರಯತ್ನಿಸಿ. ಈ ಮೂಲಕ ನಿಮ್ಮ ಇಂಗ್ಲಿಷ್ ಜ್ಞಾನವನ್ನು, ಕನ್ನಡ ಭಾಷೆಯ ನಿಮ್ಮ ಶಬ್ದ ಭಂಡಾರವನ್ನು ಸಮೃದ್ಧಗೊಳಿಸುತ್ತ ಹೋಗಬಹುದು.
ಉದಾಹರಣೆಗೆ ಇಲ್ಲಿ woods ಅಂತ ಇದೆ. ಇದರ ಅರ್ಥ ಕಟ್ಟಿಗೆಗಳೇ? ಹಾಗೆಯೇ miles ಅಂತ ಬಂದಿದೆ. ಕನ್ನಡದಲ್ಲಿ mile ಗೆ ಏನಂತಾರೆ? ಇವೇನೂ ಅಂತಹ ಕಠಿಣ ಶಬ್ದಗಳಲ್ಲ ಆದರೂ ಚಮತ್ಕಾರ ಹೊಂದಿವೆ. wood ಎಂದರೆ ಕಟ್ಟಿಗೆ. ಆದರೆ woods ಎಂದು ಬಂದಾಗ ಅದು. ಮರಗಳು-ಕಾಡು-ಅರಣ್ಯ ಎಂದು ಅರ್ದಥಲ್ಲಿ ಆಳವನ್ನು ಸಾಧಿಸುತ್ತದೆ. ಹಾಗೆಯೇ ಕುವೆಂಪು ಅವರು ತಮ್ಮ ಒಂದು ಕವನದಲ್ಲಿ ಅರಣ್ಯಕ್ಕೆ “ವಿಪಿನ” ಎಂದೂ ಬಳಸಿದ್ದಾರೆ. ಇದಕ್ಕೆ ಕಾನನ ಎಂದೂ ಅರ್ಥ ಇದೆ. ನೋಡಿ ಒಂದು ಶಬ್ದದಿಂದ ಏನೆಲ್ಲ ಸಮಾನಾರ್ಥಕ ಶಬ್ದಗಳು ಹೊರಡುತ್ತವೆ ಮತ್ತು ಅರ್ಥದ ಆಳ ಹಿಗ್ಗುತ್ತದೆ! ಅದಕ್ಕೇ ಕೇಶಿರಾಜ ಶಬ್ದಮಣಿ ದರ್ಪಣದಲ್ಲಿ ಹೇಳಿದ್ದಾನೆ : “ಶಬ್ದಪಾರಮಾರ್ಗಮಶಕ್ಯಂ”! ಅಂದರೆ ಶಬ್ದವೊಂದರ ಅರ್ಥದ ಆಳವನ್ನುಕಾಣುವುದು ಅಸಾಧ್ಯ ಎಂದು. mile ಗೆ ಕನ್ನಡದಲ್ಲಿ ಸಮಾನ ಪದ ಇಲ್ಲ. ಆದರೂ ಕನ್ನಡದ್ದೇ ಅನ್ನುವಷ್ಟು ಈ ನೆಲದಲ್ಲಿ ಅದು ಹಾಸುಹೊಕ್ಕಾಗಿಬಿಟ್ಟಿದೆ. ಹೀಗಾಗಿ ಐಎಎಸ್ ಮುಖ್ಯ ಪರೀಕ್ಷೆ ಬರೆಯುವಾಗ ನೀವು ಎಲ್ಲ ತಾಂತ್ರಿಕ ಶಬ್ದಗಳಿಗೂ ಕನ್ನಡದ ಒಂದು ಸಮಾನ ಶಬ್ದವನ್ನು ಬರೆಯಬೇಕೆಂಬ ತಪ್ಪು ತಿಳಿವಳಿಕೆಗೆ ಒಳಗಾಗಬೇಡಿ. ಬಸ್ಸು, ಮೈಲು, ಕಂಪ್ಯೂಟರ್ (ಗಣಕಯಂತ್ರ) ಶಬ್ದಗಳನ್ನು ಹಾಗೆಯೇ ಬಳಸಬಹುದು. ಆದರೆ ಗ್ರೀನ್ ಹೌಸ್ ಎಫೆಕ್ಟ್, ಗ್ಲೋಬಲೈಜೇಷನ್… ಇಂತಹ ಶಬ್ದಗಳಿಗೆ ಕನ್ನಡದ ಶಬ್ದಗಳನ್ನು ಬಳಸಿದರೆ ಅದು ನಿಮಗೆ ಹೆಚ್ಚು ಅಂಕಗಳನ್ನು ತರುತ್ತದೆ.
ಮುಂದಿನ ಭೇಟಿಯಲ್ಲಿ ಐಎಎಸ್ ಪೂರ್ವಾಭಾವಿ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳನ್ನು ಕನ್ನಡದಲ್ಲಿ ಅರ್ಥೈಸಿ ಕೊಂಡು ಸಮರ್ಥ ಉತ್ತರಗಳನ್ನು ಹೇಗೆ ಕೊಡಬಹುದೆಂದು ನೋಡುತ್ತ ಹೋಗೋಣ. ಹಾಗೆಯೆ ಒಂದು ಮುಖ್ಯ ಘೋಷಣೆ : ನಾನು ಐಎಎಸ್ ಶಬ್ದಕೋಶ ವೊಂದನ್ನು ನಿರ್ಮಿಸಿದ್ದೇನೆ. ಅದನ್ನೂ ಇಲ್ಲಿ ಒಂದೊಂದಾಗಿ ಚರ್ಚೆ ಮಾಡುತ್ತ ಹೋಗುತ್ತೇನೆ. ಇದು ನಿಮ್ಮ ಪರೀಕ್ಷಾ ತಯಾರಿಗೆ ಅತ್ಯುಪಯುಕ್ತವಾಗಲಿದೆ.
-IAS Monk